ಓಹಿಲಯ್ಯ: ನೂತನ ವೀರಶೈವ ಶರಣರಲ್ಲಿ ಒಬ್ಬ. ಗುಜರಾತಿನ ವಿಲಾಸವತಿ ಪಟ್ಟಣದಲ್ಲಿ ರಾಜ್ಯಭಾರ ಮಾಡುತ್ತಿದ್ದ ನಿಃಕುಂಭರಾಜನ ಮಗ. 16 ವರ್ಷದವನಾದಾಗ ತಂದೆ ಶಿವೈಕ್ಯನಾದ. ಸಾವೆಂದರೆ ಏನೆಂಬುದನ್ನೆ ಅರಿಯದಿದ್ದ ಮುಗ್ಧ ಬಾಲಕ ತನ್ನ ತಂದೆ ಇನ್ನೆಂದಿಗೂ ಹಿಂದಿರುಗನೆಂಬುದನ್ನು ಕೇಳಿ ಅಂಥ ಸಾವಿನಿಂದ ಹೇಗೆ ಪಾರಾಗಬಹುದೆಂದು ಯೋಚಿಸಿ ಉಮ್ಮಳಿಸುತ್ತಾನೆ. ಈ ಸಾವಿನಿಂದ ತಪ್ಪಿಸಿಕೊಳ್ಳಲು ಸೌರಾಷ್ಟ್ರದ ಸೋಮೇಶ್ವರನ ಕೃಪೆಯೊಂದೇ ಮಾರ್ಗವೆಂಬುದನ್ನು ಶಿವಭಕ್ತನೋರ್ವನಿಂದ ತಿಳಿದ ಓಹಿಲಯ್ಯ ರಾಜ್ಯಕೋಶಗಳನ್ನು ತೊರೆದು ಸೋಮೇಶ್ವರಲಿಂಗದ ಪುಜೆಯಲ್ಲಿ ತತ್ಪರನಾದ. ಒಮ್ಮೆ ಆತ ಧ್ಯಾನಮಗ್ನನಾಗಿದ್ದಾಗ ಪರಶಿವ ಕಾಣಿಸಿಕೊಂಡು 12 ವರ್ಷಕಾಲ ತನಗೆ ಗುಗ್ಗುಳ ಸೇವೆಯನ್ನು ಸಲ್ಲಿಸಿದರೆ ಸಶರೀರನಾಗಿ ಆತನನ್ನು ಕೈಲಾಸಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದ. ಓಹಿಲಯ್ಯ ಪರಮ ಸಂತೋಷದಿಂದ ತನ್ನ ಪ್ರಜೆಗಳಿಂದ ಗುಗ್ಗುಳವನ್ನು ತರಿಸಿ, 12 ವರ್ಷ ಆ ವ್ರತವನ್ನಾಚರಿಸಿ, ಧೂಪದೋಹಿಲನೆಂಬ ಅನ್ವರ್ಥನಾಮವನ್ನು ಪಡೆದ. ಆದರೆ ಸೋಮೇಶ್ವರ ಅದರಿಂದ ತೃಪ್ತನಾಗದೆ ಓಹಿಲಯ್ಯನೇ ಕಾಲ್ನಡಿಗೆಯಿಂದ ಗುಗ್ಗುಳದ್ವೀಪಕ್ಕೆ ಹೋಗಿ ಗುಗ್ಗುಳವನ್ನು ಹೊತ್ತು ತಂದು, ಸೇವೆ ಸಲ್ಲಿಸಬೇಕೆಂದು ವಿಧಿಸಿದ. ಓಹಿಲಯ್ಯ ಅದಕ್ಕೂ ಹಿಂಜರಿಯದೆ, ಅತ್ಯಂತ ಕಷ್ಟದಿಂದ, ಪ್ರಾಣವನ್ನು ಪಣವಾಗಿ ಒಡ್ಡಿ ಈ ಕಾರ್ಯವನ್ನು ನೆರವೇರಿಸಿದ. ಓಹಿಲಯ್ಯನ ಇಂಥ ಅಚಲಭಕ್ತಿ, ಉಗ್ರನಿಷ್ಠೆಗಳಿಗೆ ಮೆಚ್ಚಿದ ಶಿವ ಆತನನ್ನು ವಿಮಾನದಲ್ಲಿ ಕೈಲಾಸಕ್ಕೆ ಕೊಂಡೊಯ್ದು ಗಣಪದವಿಯನ್ನಿತ್ತ. ದೈವಸಾಕ್ಷಾತ್ಕಾರಕ್ಕೆ ಉತ್ಕಟಭಾವ ಅತ್ಯಗತ್ಯವೆಂಬುದನ್ನು ಪ್ರತಿಮಿಸುತ್ತದೆ. ಓಹಿಲಯ್ಯನ ಕಥಾ ಚಿತ್ರಣ.

ಓಹಿಲಯ್ಯನ ಕಥೆ ತುಂಬ ಜನಪ್ರಿಯವಾದುದು. ಹರಿಹರ ಕವಿ ಆತನ ಕಥೆಯನ್ನು ರಗಳೆಯ ಛಂದಸ್ಸಿನಲ್ಲಿ ರಚಿಸಿದ್ದಾನೆ. ಅದವನ ಸ್ವತಂತ್ರಕೃತಿ. ಉತ್ತರಪ್ರದೇಶದ ಬಸವಲಿಂಗದೇವರು, ಪಾಲ್ಕುರಿಕೆ ಸೋಮನಾಥ, ಭೀಮಕವಿ, ಶಾಂತಲಿಂಗದೇಶಿಕ, ಲಕ್ಕಣದಂಡೇಶ, ಸಿದ್ಧನಂಜೇಶ, ಗುಬ್ಬಿಯ ಮಲ್ಲಣಾರ್ಯ, ಅದೃಶ್ಯಕವಿ ಮೊದಲಾದ ಹಲವಾರು ವೀರಶೈವಕವಿಗಳು ಈತನ ಕಥೆಯನ್ನು ಭಕ್ತಿಯಿಂದ ಬಣ್ಣಿಸಿದ್ದಾರೆ.	(ಟಿ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ